ಇನ್ನೂ 1995ರ ನಂತರ ನಿರ್ಮಾಣವಾದ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕೆಂದು ಶಿವಮೊಗ್ಗದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ತಮ್ಮ ರಕ್ತವನ್ನು ಬಳಸಿಕೊಂಡು ಮನವಿ ಪತ್ರ ಬರೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಶಿವಮೊಗ್ಗದ ಶಿಕಾರಿಪುರದ ಸಾಲೇಶ್ವರ ವಿದ್ಯಾಸಂಸ್ಥೆಯ ಶಿಕ್ಷಕ ಪ್ರಶಾಂತ್ ಎನ್ನುವ ವರು ಈ ಸಾಹಸಕ್ಕೆ ಕೈ ಹಾಕಿದವರು.
ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಒತ್ತಾಯಿಸಿ, ಶಾಲಾ ಶಿಕ್ಷಕ ತಮ್ಮ ರಕ್ತದಲ್ಲಿ ಪತ್ರ ಬರೆದು ರಾಜ್ಯದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಪತ್ರ ಸಲ್ಲಿಸಲಿದ್ದಾರೆ. ರಕ್ತದಲ್ಲಿ ಪತ್ರ ಬರೆದ ಶಾಲಾ ಶಿಕ್ಷಕನ ಕಾರ್ಯಕ್ಕೆ ಚರ್ಚೆಯಾಗುತ್ತಿದೆ. ಪ್ರಶಾಂತ್ ಅವರು ಎಷ್ಟೇ ನೋವಾದರೂ ತಮ್ಮ ರಕ್ತವನ್ನು ಒಂದು ಸಿರಿಂಜ್ಗೆ ಕಾಲು ಭಾಗದಷ್ಟು ವೈದ್ಯರ ಸಹಾಯದಿಂದ ತೆಗೆದುಕೊಂಡು ಸಿರಿಂಜ್ ಸಹಾಯದಿಂದಲೇ 1995ರ ನಂತರ ಸ್ಥಾಪನೆಯಾದ ಕನ್ನಡ ಶಾಲೆಗಳನ್ನು ದಯವಿಟ್ಟು ಉಳಿಸಿ ಎಂದು ಎ4 ಬಿಳಿ ಕಾಗದದ ಮೇಲೆ ಬರೆದಿರುವುದು ಕಾಣಿಸುತ್ತದೆ.
ಇನ್ನೂ ಇದರ ಬಗ್ಗೆ ರಾಜ್ಯದಲ್ಲಿ ಹಲವು ಬಾರಿ ಅನುದಾನದ ಕುರಿತು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಅಂದು ಅನುದಾನದ ಬಗ್ಗೆ ಭರವಸೆ ನೀಡಿದ್ದರು. ಆದರೆ ಈಗ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಪ್ರಶಾಂತ್ ಅವರು ತಮ್ಮ ರಕ್ತದಲ್ಲಿ ಬರೆದು ಬೇಡಿಕೆ ಮುಂದಿಟ್ಟಿದ್ದಾರೆ. ಶಿಕ್ಷಣ ಸಚಿವರು ಭರವಸೆ ಈಡೇರಿಸದೇ ಹೋದರೆ, ನವೆಂಬರ್ 1 ರಂದು ಶಿಕ್ಷಕರೆಲ್ಲರೂ ಸೇರಿ ರಕ್ತದಲ್ಲಿ ಪತ್ರ ಬರೆಯು ವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ನಮ್ಮ ರಾಜ್ಯದಲ್ಲಿ ಹಳೆಯ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ. ಶಿಕ್ಷಣ ಸಚಿವರು ಮಧ್ಯ ಪ್ರವೇಶಿಸಿ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಬೇಕು. ಶಿಕಾರಿಪುರದ ಸಾಲೇಶ್ವರ ವಿದ್ಯಾಸಂಸ್ಥೆಯು 31 ವರ್ಷದಿಂದ ಶಿಕ್ಷಣ ನೀಡುತ್ತಿದೆ. ಸದ್ಯ ಅನುದಾನ ಇಲ್ಲದೆ ಈ ಶಾಲೆ ಕೊರಗುತ್ತಿದೆ. ಈ ಬಗ್ಗೆ ಸಚಿವರು ಗಮನ ಹರಿಸಬೇಕು ಎಂದು ಬೇಡಿಕೊಂಡರು.
ಕರ್ನಾಟಕ ರಾಜ್ಯದ ನೆಲ, ಜಲ, ಭಾಷೆ ಅಂದರೆ ಈ ನಾಡ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟೊಂದು ಅಸಡ್ಡೆ ಏಕೆ..? ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡದೆ ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ, ಕೊನೆಗೆ ಕನ್ನಡ ಶಾಲಾ ಶಿಕ್ಷಕರೊಬ್ಬರು ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆಯುವಂತಹ ದಯನೀಯ ಸ್ಥಿತಿ ನಿರ್ಮಾಣವಾಗಿರುವುದು ಪ್ರತಿಯೊಬ್ಬ ಕನ್ನಡಿಗನೂ ತಲೆತಗ್ಗಿಸುವಂತೆ ಮಾಡಿದೆ.
ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿ ಎಂದು ಬೇಡಿಕೊಂಡು ಬೇಸತ್ತ ಶಾಲಾ ಶಿಕ್ಷಕ ಪ್ರಶಾಂತ್ ಎಂಬುವವರು, ಶಿಕ್ಷಣ ಸಚಿವರಿಗೆ ತಮ್ಮ ರಕ್ತದಲ್ಲಿ ಪತ್ರ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. 1995ರ ನಂತರದ ರಾಜ್ಯದ ಶಾಲೆಗಳಿಗೆ ಅನುದಾನ ಬಂದ್: 1995ರ ನಂತರ ಆರಂಭವಾಗಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ರಾಜ್ಯ ಸರ್ಕಾರ ಅನುದಾನವನ್ನೇ ಸಂಪೂರ್ಣವಾಗಿ ನಿಲ್ಲಿಸಿ ಕನ್ನಡ ಶಾಲೆಗಳು ಮುಚ್ಚಿಹೋಗುವಂತೆ ಸಂಚು ರೂಪಿಸಿದೆ.
ಇನ್ನೂ ನವೆಂಬರ್ 1ರ ಒಳಗೆ ಈ ಬೇಡಿಕೆ ಈಡೇರದಿದ್ದರೆ ರಾಜ್ಯದ ಉಳಿದ ಕನ್ನಡ ಶಿಕ್ಷಕರೂ ರಕ್ತದಲ್ಲಿ ಪತ್ರ ಬರೆಯುವುದಾಗಿ ಎಚ್ಚರಿಸಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳನ್ನು ರಕ್ಷಿಸಲು ಶಿಕ್ಷಕರು ರಕ್ತ ಹರಿ ಸಬೇಕಾದ ಸ್ಥಿತಿ ಬಂದಿರುವುದು ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಕಪ್ಪು ಚುಕ್ಕೆ.
ನಮ್ಮ ರಾಜ್ಯದ ಮುಖ್ಯಮಂತ್ರಿಗಳೇ, ಕೇವಲ ಭಾಷಣಗಳಲ್ಲಿ ಕನ್ನಡ ಪ್ರೇಮ ಮೆರೆಯುವುದನ್ನು ಬಿಟ್ಟು, ತಕ್ಷಣವೇ 1995ರ ನಂತರದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿ! ಇಲ್ಲದಿದ್ದರೆ ಈ 'ಕನ್ನಡ ವಿರೋಧಿ' ಕಾಂಗ್ರೆಸ್ ಸರ್ಕಾರವನ್ನು ಕನ್ನಡಿಗರು ಕ್ಷಮಿಸುವುದಿಲ್ಲ ಎಂದು ಬರೆದುಕೊಂಡು ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದು ಸರ್ಕಾರ ಶಿಕ್ಷಣ ಸಚಿವರು ಹೇಗೆ ಸ್ಪಂದಿಸುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
